ಕಾಬುಕೀ

 ಹದಿನೇಳನೆಯ ಶತಮಾನದಲ್ಲಿ ಜಪಾನಿನಲ್ಲಿ ಉಗಮಗೊಂಡ ಸಾಂಪ್ರದಾಯಿಕವೂ ಜನಪ್ರಿಯವೂ ಆದ ಒಂದು ನಾಟಕಪ್ರಕಾರ. ವಿಪರೀತ ವೇಷ ಭೂಷಣಗಳೂ ಪ್ರಾಸಬದ್ಧ ಸಂಭಾಷಣೆಗಳೂ ವಿಚಿತ್ರ ರೀತಿಯ ಅಭಿನಯಗಳೂ ಈ ನಾಟಕಗಳಲ್ಲಿದ್ದು ನೃತ್ಯ, ಸಂಗೀತಗಳು ನಾಟಕಕ್ಕೆ ಕಳೆ ಕೊಡುತ್ತದೆ. ಕಾಬುಕೀ ಎಂಬುದಕ್ಕೆ ಜಪಾನಿನಲ್ಲಿ ಈಗ ಗೀತ-ನೃತ್ಯಕಲೆ ಎಂಬುದಾಗಿ ಅರ್ಥ ಮಾಡುವುದಾದರೂ ವಿನೋದಪಡಿಸುವುದು, ಸಂತೋಷಪಡಿಸುವುದು ಎಂಬರ್ಥವುಳ್ಳ ಒಂದು ಶಬ್ದ ಹಿಂದೆ ಇದ್ದು ಬಹುಶಃ ಆ ಶಬ್ದದಿಂದ ಕಾಬುಕೀ ಎಂಬ ಪದದ ಉಗಮವಾಗಿರಬೇಕೆಂದು ಕೆಲವರ ಮತ. ಓ-ಕುನಿ ಎಂಬ ದೇವಾಲಯ ನರ್ತಕಿ ಮತ್ತು ಕೇವಲ ಹೆಂಗಸರೇ ಇದ್ದಂಥ ಅವಳ ತಂಡ ನಡೆಸಿದ ಪ್ರದರ್ಶನಗಳಂದ ಇಂಥ ನಾಟಕಗಳಿಗೆ ಅವಕಾಶವಾಗಿದ್ದಿರಬಹುದೆಂದೂ ಹೇಳಲಾಗಿದೆ. ಈ ಬಗೆಯ ನಾಡಕ ಕಂಪನಿಗಳಲ್ಲಿ ಮೊದಮೊದಲಿಗೆ ಹೆಂಗಸರೇ ಹೆಚ್ಚಾಗಿ ಇರುತ್ತಿದ್ದರು. ಕಾಲಕ್ರಮೇಣ ಅಶ್ಲೀಲ ನೃತ್ಯಗಳೂ ತತ್ಸಂಬಂಧೀ ಗೀತೆಗಳೂ ಇಂಥ ನಾಟಕದಲ್ಲಿ ಕಾಣಬರಲಾಗಿ, ಇವನ್ನು ನಿಲ್ಲಿಸಲು ಟೋಕುಗಾವ ಸರ್ಕಾರ ಹಾಕಿದ ನಿಷೇಧದಿಂದಾಗಿ (1629) ಮಹಿಳೆಯರಾರೂ ನಾಟಕಗಳಲ್ಲಿ ಭಾಗವಹಿಸುವುದು ಸಾಧ್ಯವಿಲ್ಲವಾಯಿತು. ಇದರಿಂದಾಗಿ ಕೇವಲ ಹುಡುಗರು ಮತ್ತು ಯುವಕರೇ ಹೆಂಗಸರ ಪಾತ್ರಗಳನ್ನು ಹಾಕತೊಡಗಿದರು. ಕೊನೆಕೊನೆಗೆ ಎಲ್ಲ ಪಾತ್ರಗಳನ್ನೂ ಗಂಡಸರೇ ಅಭಿನಯಿಸುತ್ತಿದ್ದರು. ಹೀಗಾಗಿ ಕಾಬುಕೀ ನೈಜವೈಶಿಷ್ಟ್ಯಗಳಿಂದ ಹೊರತಾಗಿತ್ತಾದರೂ ಕೆಲಕಾಲ ಉತ್ತಮ ಸಂಭಾಷಣೆ ಮತ್ತು ದೃಶ್ಯಾವಳಿಗಳಿಂದ ಜನಪ್ರಿಯವಾಗಿತ್ತು. ಸಮಯ ಕಳೆದಂತೆ ಪಾತ್ರನಿರೂಪಣೆಯಲ್ಲಿ ಮಾರ್ಪಾಟುಗಳುಂಟಾದುವು. ಆಯಾ ಪಾತ್ರನಿರೂಪಣೆಗೆ ಮುಖಕ್ಕೆ ಬಣ್ಣ ಬಳಿದುಕೊಳ್ಳುವ ಪದ್ಧತಿ ಚೀನದಿಂದ ಒಂದು ಇಲ್ಲಿಯೂ ಕಾಣಿಸಿತಾದರೂ ಕಾಬುಕೀ ಮಾತ್ರ ತನ್ನ ಜಪಾನೀ ದೇಶೀಯತೆಯನ್ನು ಉಳಿಸಿಕೊಂಡಿತು.

 ಮೊದಮೊದಲಿನ ಕಾಬುಕೀ ನಾಟಕಗಳು ಜಪಾನಿನ ನೊ ಗೀತನಾಟಕಗಳಂತೆಯೇ ಒಂದು ಅಂಕದ ನಾಟಕವಾಗಿದ್ದುವು. ಕಾಲಕ್ರಮೇಣ ಚಾರಿತ್ರಿಕವೂ ಸಾಮಾಜಿಕವೂ ಆದ ಕಥಾಪ್ರಸಂಗಗಳು ಬಂದುವು. ಕೆಲವೊಂದು ಸಲ ಅವು ಹತ್ತು ಅಂಕಗಳಿಗಿಂತಲೂ ಹೆಚ್ಚು ವ್ಯಾಪಕವಾಗಿರುತ್ತಿದ್ದುವು. ಪರದೆ, ನೈಜ ದೃಶ್ಯಾವಳಿಗಳು, ತಿರುಗುವ ರಂಗ ಸಜ್ಜಿಕೆ-ಮುಂತಾದ ತಾಂತ್ರಿಕ ವಿಶೇಷಗಳು ಕಾಬುಕೀ ಮತ್ತು ನೊ ನಾಟಕಗಳಿಗಿದ್ದ ತಾರತಮ್ಯವನ್ನು ಎತ್ತಿತೋರಿಸುತ್ತಿದ್ದುವು. ಕಾಬುಕೀಯಲ್ಲಿನ ಭಾವಸಮೃದ್ಧಿ ಮತ್ತು ಅಬಾಧಿತ ಭಾವಪೂರ್ಣ ಸನ್ನಿವೇಶಗಳು ಅದು ಜನಪ್ರಿಯವಾಗಲು ಸಹಕಾರಿಯಾದವು. ಹದಿನೇಳನೆಯ ಶತಮಾನದ ಅಂತ್ಯ ಮತ್ತು ಹದಿನೆಂಟನೆಯ ಶತಮಾನದ ಪ್ರಾರಂಭದ ವರ್ಷಗಳನ್ನು ಕಾಬುಕೀಯ ಪ್ರವರ್ಧಮಾನದ ಕಾಲವೆನ್ನಬಹುದು. ರಂಗ ಸಜ್ಜಿಕೆಯಲ್ಲಿ ಆದ ಸುಧಾರಣೆಗಳಲ್ಲದೆ ನಾಟಕ ಕಲಾಸಕ್ತರಾದ ಅನೇಕರು ಮುಂದೆ ಬಂದು ನಾಟಕಕಲೆಗೆ ಪುಷ್ಠಿಕೊಟ್ಟರು ; ಹೊಸ ಹೊಸ ತಾಂತ್ರಿಕ ಸುಧಾರಣೆಗಳನ್ನು ತಂದರು. ಕಾಬುಕೀನಾಟಕಗಳು ಆಕರ್ಷಿಸಿದ್ದು ಹೆಚ್ಚಾಗಿ ವರ್ತಕವರ್ಗದವರನ್ನೇ. ತಮ್ಮಲ್ಲಿದ್ದ ಐಶ್ವರ್ಯ ಮತ್ತು ವಿರಾಮವನ್ನು ನಾಟಕ ನೋಡುವುದಕ್ಕೆ ವಿನಿಯೋಗಿಸುತ್ತಿದ್ದ ಆ ವರ್ಗಕ್ಕೆ ಟೋಕುಗಾವ ಸರ್ಕಾರ ಹಾಕಿದ ನಿರ್ಬಂಧದಿಂದಾಗಿ ಅವರವರ ಕೆಲಸಕಾರ್ಯಗಳ ಮೇಲೆ ಅವರವರು ಗಮನ ನೀಡುವಂತಾಯಿತು. ಹಿಂದಿನ ಕಾಲದ ಕೆಲವು ಚಾರಿತ್ರಿಕ ನಾಟಕಗಳನ್ನು ಅಭಿನಯಿಸುವಲ್ಲಿ ಇಂದಿನ ನೈಜತೆಗೂ ಅಂದಿನ ಕಾಲ ಧರ್ಮಕ್ಕೂ ನಡುವೆ ಬರುವ ಕೆಲವು ಅಹಿತಗಳನ್ನು ಮರೆಮಾಚುವಲ್ಲಿ ಪಾತ್ರಧಾರಿಗಳು ಕೌಶಲದಿಂದ ಅಭಿನಯಿಸುತ್ತಿದ್ದರಲ್ಲದೆ ಅಂದಿನ ಆ ಉನ್ನತ ಜೀವನದ ಚಿತ್ರಣವನ್ನೂ ಆಗಿನ ಸಾಹಸಕಾರ್ಯಗಳ ಭಾವೋದ್ರೇಕ ದೃಶ್ಯಗಳನ್ನೂ ಸಭಿಕರ ಕಣ್ಣುಮುಂದೆ ತರುತ್ತಿದ್ದರು. ಸಾಮಾಜಿಕ ನಾಟಕಗಳಲ್ಲಿ, ಮನುಷ್ಯನ ಬಾಳುವೆ ಅನುಕಂಪ ಮತ್ತು ದೌರ್ಭಾಗ್ಯಗಳ ಹೋರಾಟದಲ್ಲಿ ಸಿಲುಕಿರುವುದನ್ನೂ ಮನುಷ್ಯನ ಭಾವನೆ ಮತ್ತು ನಿರ್ಬಂಧಗಳ ನಡುವೆ ಆತನ ಜೀವನ ಸಿಕ್ಕಿ ನೀರಸವಾಗಿರುವುದನ್ನೂ ಎತ್ತಿ ತೋರಿಸುತ್ತಿದ್ದರು.

 ಕಾಬುಕೀಯಲ್ಲಿ ಕೆಲವು ಸಂಪ್ರದಾಯಬದ್ದವಾದ ವಿಶೇಷಗಳು ಕಾಣಸಿಗುತ್ತವೆ. ಹೆಚ್ಚು ಕೃತಕವಾದ ಆಲಂಕಾರಿಕ ಭಾಷಣಗಳು, ಪರಾಕಾಷ್ಠೆಗೇರಿ ಸಹಜತೆಗೆ ದೂರವಾದ ಕೆಲವು ಪ್ರಸಂಗಗಳು ಎದ್ದು ಗೋಚರಿಸುತ್ತವೆ. ಆದರೆ ಸಾಮಾಜಿಕ ನಾಟಕ ಅಥವಾ ಈಜಿನ ಚಾರಿತ್ರಿಕ ನಾಟಕಗಳಲ್ಲಿ ನೈಜ ಅಭಿನಯಕ್ಕೆ ಹೆಚ್ಚಿನ ಅವಕಾಶವಿದೆ. ಸಂಪ್ರದಾಯಬದ್ಧವಾದ ನಾಟಕಗಳು ಆಧುನಿಕ ಜಪಾನಿನಲ್ಲಿ ಏಳಿಗೆಗೆ ಬರಲಾರವು ಎಂಬ ಮಾತುಗಳು ಹಲವಾರು ಸಲ ಕೇಳಿಬಂದಿದೆಯಾದರೂ ಕಾಬುಕೀ ನಾಟಕ ತನ್ನದೇ ಆದ ವೈಶಿಷ್ಟ್ಯ, ಚೈತನ್ಯ ಮತ್ತು ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಶಕ್ತಿಗಳಿಂದಾಗಿ ಇಂದಿಗೂ ಜಪಾನಿನಲ್ಲಿ ಮುಂದುವರಿದುಕೊಂಡು ಬರುತ್ತಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ